ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಮನೆ ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಇ-ಸ್ವತ್ತು ನಮೂನೆ-2 ಪಡೆಯುವ ಸಂದರ್ಭದಲ್ಲಿ ಹಾಗೂ ಈಗಾಗಲೇ ನೀಡಲಾಗಿರುವ ಇ-ಸ್ವತ್ತು ದಾಖಲೆಗಳಲ್ಲಿರುವ ತಪ್ಪುಗಳನ್ನು ತಿದ್ದುಪಡಿ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೂಡಲೇ ಈ ಸಮಸ್ಯೆ ಪರಿಹರಿಸಬೇಕು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ. ಪಾಟೀಲ್ ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಇ-ಸ್ವತ್ತು ದಾಖಲೆಗಳಲ್ಲಿ ವಿಳಾಸ, ತಂದೆಯ ಹೆಸರು, ಆಸ್ತಿಯ ಅಳತೆ, ಚೆಕ್ಕುಬಂದಿ ಸೇರಿದಂತೆ ವಿವಿಧ ಮಾಹಿತಿಗಳಲ್ಲಿ ಲೋಪದೋಷಗಳು ಕಂಡುಬರುತ್ತಿವೆ. ಇಂತಹ ದೋಷಗಳು ಆಸ್ತಿ ಮಾರಾಟದ ಸಂದರ್ಭದಲ್ಲಿ ನೊಂದಣಿ ಇಲಾಖೆಯಲ್ಲಿ
ಹಾಗೂ ಬ್ಯಾಂಕ್ಗಳಿಂದ ಸಾಲ ಪಡೆಯುವಾಗ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿವೆ. ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸಾರ್ವಜನಿಕರು ಪಾಲಿಕೆ ಕಚೇರಿಗೆ ಪದೇಪದೇ ಅಲೆದಾಡಬೇಕಾಗುತ್ತಿದ್ದು, ಇದರಿಂದ ಅವರ ಸಮಯ, ಹಣ ಹಾಗೂ ಶ್ರಮ ವ್ಯರ್ಥವಾಗುತ್ತಿದೆ. ಸಾರ್ವಜನಿಕರ ತಪ್ಪಿಲ್ಲದಿದ್ದರೂ ದಾಖಲೆಗಳಲ್ಲಿನ ಲೋಪದೋಷಗಳಿಂದ ಅವರು ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಲಾಗಿದೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಇ-ಸ್ವತ್ತು ದಾಖಲೆಗಳಲ್ಲಿನ ಲೋಪದೋಷಗಳನ್ನು ತ್ವರಿತವಾಗಿ ತಿದ್ದುಪಡಿ ಮಾಡಲು ಸರಳ ಮತ್ತು ಪಾರದರ್ಶಕ ವ್ಯವಸ್ಥೆ ಕಲ್ಪಿಸಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಬಾಕಿ ತಿದ್ದುಪಡಿ ಅರ್ಜಿಗಳನ್ನು
ಶೀಘ್ರವಾಗಿ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಪದೇಪದೇ ಪಾಲಿಕೆ ಕಚೇರಿಗೆ ಅಲೆದಾಡದಂತೆ ನಿಗದಿತ ಅವಧಿಯಲ್ಲಿ ತಿದ್ದುಪಡಿ ಮಾಡಿಕೊಡುವ ವ್ಯವಸ್ಥೆ ಜಾರಿಗೆ ತರಬೇಕು. ತಿದ್ದುಪಡಿ ಪ್ರಕ್ರಿಯೆ ಹಾಗೂ ಅರ್ಜಿಯ ಸ್ಥಿತಿಗತಿ ಕುರಿತು ಸಾರ್ವಜನಿಕರಿಗೆ
ಸ್ಪಷ್ಟ ಮಾಹಿತಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಿ, ಇ-ಸ್ವತ್ತು ತಿದ್ದುಪಡಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಮನವಿ ಸಲ್ಲಿಸುವ ವೇಳೆ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಸುರ್ವೆ, ಲಿಂಗರಾಜ್ ಯಾದವ್, ಹರೀಶ್ ಶಾಮನೂರು, ಉಪಸ್ಥಿತರಿದ್ದರು.
Leave a comment