Home ದಾವಣಗೆರೆ ಬರಗಾಲದ ಬೆನ್ನಲ್ಲೇ ಬೆಸ್ಕಾಂಗೆ ಕ್ಲಾಸ್: ಕುಡಿಯುವ ನೀರು, ಬೆಳೆಗಳಿಗೆ ವಿದ್ಯುತ್ ಪೂರೈಕೆಗೆ ಆದ್ಯತೆ
ದಾವಣಗೆರೆ

ಬರಗಾಲದ ಬೆನ್ನಲ್ಲೇ ಬೆಸ್ಕಾಂಗೆ ಕ್ಲಾಸ್: ಕುಡಿಯುವ ನೀರು, ಬೆಳೆಗಳಿಗೆ ವಿದ್ಯುತ್ ಪೂರೈಕೆಗೆ ಆದ್ಯತೆ

Share
ವಿದ್ಯುತ್
Share

ದಾವಣಗೆರೆ: ಜಿಲ್ಲೆಯಲ್ಲಿ ಎದುರಾಗಿರುವ ಬರಗಾಲದ ಛಾಯೆ, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ, ಕುಡಿಯುವ ನೀರಿನ ಅಭಾವ ಹಾಗೂ ನಾಲೆಯ ನೀರಿನ ಸದ್ಬಳಕೆ ಆಗಬೇಕು, ಬೆಸ್ಕಾಂ ಅಧಿಕಾರಿಗಳು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ರೈತರ ಬೆಳೆಗಳಿಗೆ ಕನಿಷ್ಠ 6 ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ನೀಡಲು ಶ್ರಮಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜಪ್ಪ ಅವರು ತಿಳಿಸಿದರು.

ಅವರು ಮಂಗಳವಾರ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಾವಣಗೆರೆ ಲೈವ್ WhatsApp Group

ಜಾಯಿನ್ ಆಗಿ

Join Now

ಚನ್ನಗಿರಿ, ಮಾಯಕೊಂಡ, ದಾವಣಗೆರೆ ದಕ್ಷಿಣ ಸೇರಿದಂತೆ ಈ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ನಾಲೆಗಳಲ್ಲಿ ನೀರು ಹರಿಯುವುದರಿಂದ ಸುತ್ತಮುತ್ತಲಿನ ಬೋರ್‌ವೆಲ್‌ಗಳು ಮರುಪೂರಣಗೊಳ್ಳುತ್ತಿದ್ದು, ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಇದು ಅತ್ಯಂತ ಅಗತ್ಯವಾಗಿದೆ. ಕುಡಿಯುವ ನೀರಿನ ಯೋಜನಾ ಬೋರ್‌ವೆಲ್‌ಗಳಿಗೆ ಹಾಗೂ ಸಾರ್ವಜನಿಕ ನೀರಿನ ಪೂರೈಕೆಗೆ ಯಾವುದೇ ಅಡೆತಡೆಯಿಲ್ಲದೆ ವಿದ್ಯುತ್ ನೀಡುವುದು ಪ್ರಥಮ ಆದ್ಯತೆಯಾಗಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಲೆಗಳಿಂದ ಅಧಿಕ ಪ್ರಮಾಣದ ಅಕ್ರಮ ಪಂಪ್‌ಸೆಟ್‌ಗಳ (20 ಹೆಚ್.ಪಿ ಮೋಟಾರ್‌ಗಳು) ಮೂಲಕ ನೀರು ಎತ್ತುವುದರಿಂದ, ನಾಲೆಯ ಕೊನೆಯ ಭಾಗದ ಅಧಿಕೃತ ಅಚ್ಚುಕಟ್ಟುದಾರರಿಗೆ ನೀರು ತಲುಪುತ್ತಿಲ್ಲ ಎಂದು ತಿಳಿಸಿದರು.

ಬೆಸ್ಕಾಂ ಅಧೀಕ್ಷಕರಾದ ತಿಪ್ಪೇಸ್ವಾಮಿ ಅವರು ಮಾತನಾಡಿ, ಗಾಳಿ ಮತ್ತು ಸೌರ ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗುತ್ತಿರುವ ಏರಿಳಿತ ಹಾಗೂ ಸ್ಟೇಷನ್ ಮತ್ತು ಲೈನ್‌ಗಳ ಮೇಲಿನ ಶೇಖರಣಾ ಒತ್ತಡದಿಂದಾಗಿ ವಿದ್ಯುತ್ ವಿತರಣೆಯಲ್ಲಿ ಕೆಲ ತಾಂತ್ರಿಕ ತೊಡಕುಗಳು ಎದುರಾಗಿವೆ. ಸದ್ಯ ಲಭ್ಯವಿರುವ ಮಾರ್ಗಗಳಲ್ಲಿ ಪ್ರತಿದಿನ 6 ಗಂಟೆಗಳ ಕಾಲ ವಿದ್ಯುತ್ ನೀಡಲಾಗುತ್ತಿದ್ದು, ಸಮಸ್ಯೆಯಿರುವ ಕೆಲವು ಉಪಕೇಂದ್ರಗಳ ವ್ಯಾಪ್ತಿಯಲ್ಲಿ 5 ರಿಂದ 5.30 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ರಾಜ್ಯಾದ್ಯಂತ ಕಳೆದ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ವಿದ್ಯುತ್ ಬೇಡಿಕೆಯು 12000 – 15000 ಮೆಗಾವ್ಯಾಟ್‌ನಿಂದ 20000 ಮೆಗಾವ್ಯಾಟ್‌ಗೆ ಏರಿಕೆಯಾಗಿದೆ ಎಂದು ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಸಾಹಿತ್ಯ ಎಂ.ಆಲದಕಟ್ಟಿ ಅವರು ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಜಮೀನನ್ನು ‘ನೇರ ಖರೀದಿ ಕರಾರು’ ವಿಧಾನದ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ವಶಪಡಿಸಿಕೊಳ್ಳಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.

ಚನ್ನಗಿರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವಿಲ್ಲದೆ, ಖಾಸಗಿ ಬಸ್ ನಿಲ್ದಾಣದ ಬಳಿಯೇ ಸರ್ಕಾರಿ ಬಸ್‌ಗಳು ಸಂಚರಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಚಾಲಕ-ನಿರ್ವಾಹಕರಿಗೆ ಗೊಂದಲ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹರಿಸಲು ಸಿಬ್ಬಂದಿ/ಪೋಲೀಸ್ ಸಿಬ್ಬಂದಿ ನೇಮಿಸಿ ಸಂಚಾರ ಸುಗಮಗೊಳಿಸುವುದು ಸೇರಿದಂತೆ ಶಾಶ್ವತ ಬಸ್ ನಿಲ್ದಾಣ ನಿರ್ಮಾಣದ ಜಮೀನು ಸ್ವಾಧೀನಕ್ಕೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದರು.

ಭೂಸ್ವಾಧೀನ ಕಾಯ್ದೆ 2013ರ ಸುದೀರ್ಘ ಪ್ರಕ್ರಿಯೆಗೆ ಕಾಯುವ ಬದಲು, ನೇರ ಖರೀದಿ ಕರಾರಿನ ಮೂಲಕ 15 ದಿನಗಳಿಂದ 1 ತಿಂಗಳ ಅವಧಿಯಲ್ಲಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಅವಕಾಶವಿದೆ. ಈ ವಿಧಾನದಲ್ಲಿ ಭೂಮಾಲೀಕರಿಗೆ ಕಾಯ್ದೆಯನ್ವಯ ದೊರೆಯುವಷ್ಟೇ ಸೂಕ್ತ ಪರಿಹಾರದ ಮೊತ್ತ ಏಕಗಂಟಿನಲ್ಲಿ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಜೊತೆಗೆ, ಮುಂದಿನ ಜಮೀನು ಖರೀದಿಗೆ ಮುದ್ರಾಂಕ ಶುಲ್ಕ ವಿನಾಯಿತಿ ಸೌಲಭ್ಯವೂ ಸಿಗಲಿದ್ದು, ಕೋರ್ಟ್-ಕಚೇರಿ ಅಲೆದಾಟ ತಪ್ಪಲಿದೆ ಎಂದರು.

ಕೆಎಸ್‌ಆರ್‌ಟಿಸಿ ಮತ್ತು ಇಲಾಖೆಯ ಅಧಿಕಾರಿಗಳು ಜಮೀನಿನ ಮಾಲೀಕರನ್ನು ವೈಯಕ್ತಿಕವಾಗಿ ಭೇಟಿಯಾಗಿ, ನೇರ ಖರೀದಿಯ ಅನುಕೂಲಗಳನ್ನು ಮನವರಿಕೆ ಮಾಡಿ ಒಪ್ಪಿಗೆ ಪಡೆಯುವಂತೆ ಸೂಚಿಸಿ, ಈ ಪ್ರಕ್ರಿಯೆಯ ಕುರಿತು ಜಿಲ್ಲಾಧಿಕಾರಿಗಳು  ಹಾಗೂ ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚಿಸಿ, ಕಡತವನ್ನು ಶೀಘ್ರ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ನಿರ್ದೇಶನದಂತೆ ‘ಭಾರತ ಜೋಡೋ ಯುವ ಸಂಘ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯದಿಂದ ಬಂದಿರುವ ವಿಶೇಷ ಕೋಡ್ ಮತ್ತು ಸಂಖ್ಯೆ ಹೊಂದಿರುವ ಅರ್ಜಿ ನಮೂನೆಗಳನ್ನು ಮುದ್ರಿಸಿ, ಪ್ರತಿಯೊಂದು ಗ್ರಾಮಗಳಿಗೂ ವಿತರಿಸಲಾಗುತ್ತಿದೆ. ಈ ನಮೂನೆಗಳು ಯೂನಿಕ್ ಆಗಿರುವುದರಿಂದ ಇವುಗಳನ್ನು ಜಾಗರೂಕತೆಯಿಂದ ಹಂಚಿಕೆ ಮಾಡಿ, ಭರ್ತಿ ಮಾಡಿದ ಅರ್ಜಿಗಳನ್ನು ಜವಾಬ್ದಾರಿಯಿಂದ ವಾಪಸ್ ಸಂಗ್ರಹಿಸಲು ಗ್ಯಾರಂಟಿ ಸಮಿತಿಯ ಸದಸ್ಯರು ಶ್ರಮಿಸಬೇಕು. ಈ ಯೋಜನೆಗೆ ಅಕ್ಟೋಬರ್ 2 ರೊಳಗೆ ಚಾಲನೆ ನೀಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಿದರು.

ಸಮಿತಿ ಸದಸ್ಯರಾದ ಡೋಲಿ ಚಂದ್ರು ಅವರು ಮಾತನಾಡಿ, ಬಸ್‌ ನಿಲ್ದಾಣದಲ್ಲಿ ಭದ್ರತೆ ಮತ್ತು ಸಿಸಿಟಿವಿ ಕೊರತೆ ಇದೆ.  ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ ಆಪರೇಟರ್‌ಗಳಿಲ್ಲದೆ ನಿಷ್ಕ್ರಿಯಗೊಂಡಿದೆ.  ರಾತ್ರಿ ವೇಳೆ ಮಹಿಳೆಯರ ಸುರಕ್ಷತೆ, ಪುಂಡ-ಪೋಲಿಗಳ ಹಾವಳಿ ನಿಯಂತ್ರಣಕ್ಕೆ ಸಿಸಿಟಿವಿ ನಿರ್ವಹಣೆ ಮತ್ತು ಪೊಲೀಸ್‌ ಗಸ್ತು ಹೆಚ್ಚಿಸಲು ಕ್ರಮವಹಿಸಬೇಕು , ಬಸ್‌ ನಿಲ್ದಾಣದ ಶೌಚಾಲಯದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತಿದ್ದಾರೆ.  ಶೌಚಾಲಯಗಳಲ್ಲಿ ಮಹಿಳಾ ಸಿಬ್ಬಂದಿಯನ್ನು ನೇಮಿಸುವಂತೆ ಹಾಗೂ ಹೆಚ್ಚಿನ ದರ ವಸೂಲಿ ತಡೆಯುವಂತೆ ಸಭೆಯ ಗಮನಕ್ಕೆ ತಂದರು.

ಅನ್ನಭಾಗ್ಯ: ಜಿಲ್ಲೆಯಲ್ಲಿ ಜುಲೈ -2023 ರಿಂದ ಡಿಸೆಂಬರ್‌ 2024 ರ ಅಂತ್ಯದ ವರೆಗೆ ಒಟ್ಟು 346.33 ಕೋಟಿ ಹಣವನ್ನು ಡಿಬಿಟಿ ಮುಖಾಂತರ 1242812 ಫಲಾನುಭವಿಗಳ ಖಾತೆಗಳಿಗೆ ವರ್ಗಾಯಿಸಲಾಗಿರುತ್ತದೆ. ಫೆಬ್ರವರಿ 2025 ರಿಂದ ಸೆಪ್ಟೆಂಬರ್‌ 2026 ರ ಅಂತ್ಯದ ವರೆಗೆ ಪ್ರತಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗಿದ್ದು ಸೆಪ್ಟೆಂಬರ್‌ 2026 ರ ಅಂತ್ಯಕ್ಕೆ ಒಟ್ಟು 1139749 ಫಲಾನುಭವಿಗಳಿಗೆ 1193500 ಕ್ವಿಂಟಾಲ್‌ ಅಕ್ಕಿಯನ್ನು ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಜಿಲ್ಲೆಯಲ್ಲಿ ಶೇ. 52 ರಷ್ಟು ಇ-ಕೆವೈಸಿ ಪೂರ್ಣಗೊಂಡಿದ್ದು ರಾಜ್ಯದಲ್ಲಿ 7 ನೇ ಸ್ಥಾನದಲ್ಲಿದ್ದೇವೆ, ನಿಗದಿತ ಅವಧಿಯೊಳಗೆ ಇ-ಕೆವೈಸಿ ಕಾರ್ಯ ಪೂರ್ಣಗೊಳಿಸುತ್ತೇವೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್‌ ಅವರು ಸಭೆಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ: ಜಿಲ್ಲೆಯಲ್ಲಿ ಆಗಸ್ಟ್‌ 2023 ರಿಂದ ಜೂನ್‌ 2026 ರವರೆಗೆ 352521 ಫಲಾನುಭವಿಗಳಿಗೆ ರೂ. 2264.33 ಕೋಟಿ ಹಣ ಪಾವತಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಎರಡು ಬಾರಿ ಹಣ ಸಂದಾಯವಾಗಿಲ್ಲವೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಾನಾಯ್ಕ್‌ ಸಭೆಗೆ ತಿಳಿಸಿದರು.

ಗೃಹಜ್ಯೋತಿ : ಜಿಲ್ಲೆಯಲ್ಲಿ ಈ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ 2026 ರ ಮಾಹೆಯಲ್ಲಿ ಒಟ್ಟು 512933 ಫಲಾನುಭವಿಗಳಿಗೆ 4336.61 ಮೊತ್ತವನ್ನು ಹೊಂದಾಣಿಕೆ ಮಾಡಲಾಗಿದೆ ಹಾಗೂ ಮನೆ ಮನೆ ಭೇಟಿ ಕಾರ್ಯ ಶೇ. 92 ರಷ್ಟು ಪೂರ್ಣಗೊಂಡಿದ್ದು ಇನ್ನು 26000 ಮನೆಗಳು ಬಾಕಿ ಇವೆ ಎಂದು ಬೆಸ್ಕಾಂ ಇಇ ತಿಪ್ಪೇಸ್ವಾಮಿ ಅವರು ಸಭೆಗೆ ತಿಳಿಸಿದರು.

ಶಕ್ತಿ ಯೋಜನೆ : ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 16.44 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಇದರಿಂದ ರೂ.  490.27 ಕೋಟಿ ಪ್ರಯಾಣ ದರ ಆಗಿದೆ ಎಂದು ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಕ ಗಿರೀಶ್‌ ಅವರು ತಿಳಿಸಿದರು.

ಯುವನಿಧಿ ಯೋಜನೆ : ಜಿಲ್ಲೆಯ 14532 ಪದವಿ ಫಲಾನುಭವಿಗಳಿಗೆ ತಲಾ ರೂ. 3000.00 ಗಳಂತೆ ಹಾಗೂ 347 ಡಿಪ್ಲಮೋ ಫಲಾನುಭವಿಗಳಿಗೆ ತಲಾ ರೂ. 1500.00 ಗಳಂತೆ ರೂ. 42.70 ಲಕ್ಷಗಳನ್ನು ಹೀಗೆ ಒಟ್ಟು 14879 ಫಲಾನುಭವಿಗಳಿಗೆ ರೂ. 48.27 ಕೋಟಿ ಗಳನ್ನು ಪಾವತಿಸಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ರವೀಂದ್ರ ಅವರು ಸಭೆಗೆ ತಿಳಿಸಿದರು.

ಸಮಿತಿಯ ಉಪಾಧ್ಯಕ್ಷರಾದ ಮಂಜುನಾಥ್‌, ನಂಜಾನಾಯ್ಕ್‌ , ರಾಜೇಶ್ವರಿ , ಅನೀಶ್‌ ಪಾಶ, ಸದಸ್ಯರುಗಳಾದ ಡೋಲಿ ಚಂದ್ರು, ಶಶಿಕಲಾ, ನಾಗರಾಜ್‌, ಗಿರೀಶ್‌, ಲಿಯಾಕತ್‌ ಆಲಿ, ಉಮೇಶ್‌, ಷಂಷೀರ್‌ ಅಹ್ಮದ್‌, ಶಿವರಾಮ್‌ ನಾಯಕ್‌, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ರೇಷ್ಮಾ ಕೌಸರ್‌ , ಸಿಪಿಒ ಮಲ್ಲಾನಾಯಕ್‌ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Related Articles

ಸೆಪ್ಟೆಂಬರ್ 23 ರಂದು ದಾವಣಗೆರೆಯಲ್ಲಿ ಮನೆ ಮನೆ ಕಸ ಸಂಗ್ರಹಣೆ ಇರುವುದಿಲ್ಲ: ಪಾಲಿಕೆ ಆಯುಕ್ತರ ಮಹತ್ವದ ಅಭಿಯಾನ

ದಾವಣಗೆರೆ :  ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ  ಸೆಪ್ಟೆಂಬರ್‌ 23  "ಪೌರಕಾರ್ಮಿಕರ ದಿನಾಚರಣೆ"ಯನ್ನು ಆಚರಿಸಲಾಗುತ್ತಿದೆ. ಈ...

ದಾವಣಗೆರೆ: ವಾಲ್ಮೀಕಿ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ: ಅಕ್ಟೋಬರ್ 17 ಕೊನೆ ದಿನ!

ದಾವಣಗೆರೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಜಿಲ್ಲಾ...

ಹರಿಹರ ಶಾಸಕ ಬಿ. ಪಿ. ಹರೀಶ್ ವಿರುದ್ಧ ಹಾಯ್ದ ಸ್ವಪಕ್ಷೀಯರ ದಂಗೆ: ಮಾಡಾಳ್ ಮಲ್ಲಿಕಾರ್ಜುನ್ ಕಿಡಿ

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿ. ಪಿ. ಹರೀಶ್ ವಿರುದ್ದ ಸ್ವಪಕ್ಷೀಯರೇ ದಂಗೆ ಎದ್ದಿದ್ದಾರೆ. ಮಾಜಿ...

ಬೀನಾ ಗೋರೆ ಅವರ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯದ ಅಂಕಿತ

ದಾವಣಗೆರೆ: ಸೂಕ್ಷ್ಮಜೀವಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಬೀನಾ ಗೋರೆ ಅವರು "ಸ್ಟಡೀಸ್ ಆನ್ ವೇರಿಯಬಿಲಿಟಿ ಇನ್...

ಫಾಲೋ
ಮಾಡಿ