ದಾವಣಗೆರೆ: ದಾವಣಗೆರೆಯ ಶ್ರೀ ಸಿದ್ಧಗಂಗಾ ಸಂಸ್ಥೆಯಲ್ಲಿ ವಿಶಿಷ್ಠ ರೀತಿಯಲ್ಲಿ ಗಣೇಶ ಚತುರ್ಥಿ ಆಚರಿಸುತ್ತಿರುವುದು ನಗರದ ಮನೆ ಮಾತಾಗಿದೆ.

ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಪರಿಸರ ಸ್ನೇಹಿ ಪೇಪರ್ ಗಣಪತಿಯ ತಯಾರಿಕೆಗೆ ಸಂಸ್ಥೆಯ ನಿರ್ದೇಶಕರಾದ ಡಾ. ಜಯಂತ್, ಚಿತ್ರಕಲಾ ಶಿಕ್ಷಕರಾದ ಸ್ವಾತಿ ಜಿ., ನಟರಾಜ ಶೃಂಗಾರ, ಹೀನಾ ಕೌಸರ್, ಮುಜಸ್ಸಿಂ, ಲಕ್ಷ್ಮಿ, ಸ್ನೇಹಾ ಇವರು ಮಕ್ಕಳ ನೆರವಿನಿಂದ ಮತ್ತು ಆಸಕ್ತ ಶಿಕ್ಷಕರ ಸಹಾಯದಿಂದ ಹಬ್ಬದ ಹಿಂದಿನ ವಾರ ತಯಾರಿ ಪ್ರಾರಂಭಿಸುತ್ತಾರೆ.
ನೋಡು ನೋಡುತ್ತಿದ್ದಂತೆ ಸರ್ವಾಭರಣ ಭೂಷಿತನಾದ 14 ಅಡಿ ಎತ್ತರದ ಗಣಪ ಶಾಲೆಯ ರಂಗಮಂದಿರದ ಮೇಲೆ ಆಕಾರ ಪಡೆಯುತ್ತ ಹಬ್ಬದ ಹಿಂದಿನ ದಿನ ಪೂರ್ಣಾಕೃತಿ ಪಡೆಯುತ್ತಾನೆ. ತಾವೇ ನಿರ್ಮಿಸಿದ ಗಣಪ ಸರ್ವಾಂಗ ಸುಂದರನಾಗಿ ಕಾಣುವುದನ್ನು ಕಂಡು ಮಕ್ಕಳು ಸಂತೃಪ್ತರಾಗುತ್ತಾರೆ. ಇದು ಕಳೆದ 13 ವರ್ಷಗಳಿಂದ ನಡೆದು ಬಂದ ಪರಿಪಾಠ. ಈ ವರ್ಷವೂ ಬೃಹತ್ ಗಣಪ ಶಾಲೆಯ ಮಂಟಪದಲ್ಲಿ ವಿರಾಜಮಾನನಾಗಿದ್ದಾನೆ.
ಹಬ್ಬದ ದಿನದ ಸಂಭ್ರಮ ಕಣ್ಮನ ಸೆಳೆಯುವಂತಿರುತ್ತದೆ ಎಂದು ಇಲ್ಲಿಯ ನಿವಾಸಿಗಳು ಹೇಳುತ್ತಾರೆ. ಸಾಂಪ್ರದಾಯಿಕ ಉಡುಗೆ-ತೊಡುಗೆಯಲ್ಲಿ ಮೆರವಣಿಗೆಗೆ ಸಿದ್ಧರಾಗಿ ಬಂದ ಮಕ್ಕಳು ಗಣೇಶನನ್ನು ಅಂಬೇಡ್ಕರ್ ಸರ್ಕಲ್ ನಿಂದ ಕರೆತಂದರು.
ಅಲಂಕೃತ ರಥದ ಮೇಲೆ ರಾಜಗಾಂಭೀರ್ಯದಲ್ಲಿ ಕುಳಿತ ಗಣಪನ ರಥವನ್ನು ಮಕ್ಕಳು ನಿಧಾನವಾಗಿ ಎಳೆಯುತ್ತಾ ಭಕ್ತಿಗೀತೆಗಳನ್ನು ಹಾಡುತ್ತಾ ಶಾಲೆಯ ಮಂಟಪಕ್ಕೆ ಕರೆತಂದರು.
ಮೆರವಣಿಗೆಯಲ್ಲಿ ಲಕ್ಷ್ಮಿ, ಸರಸ್ವತಿ, ಶ್ರೀರಾಮ ಹೀಗೆ ದೇವಾನುದೇವತೆಗಳು ಟ್ರಾಕ್ಟರಿನಲ್ಲಿ ಕುಳಿತು ವೀಕ್ಷಕರ ಗಮನ ಸೆಳೆದರು. ನಂದಿಕೋಲು, ಪಟಕುಣಿತ, ಡೊಳ್ಳು, ಇವು ಜಾನಪದ ಸೊಗಡನ್ನು ಬಿಂಬಿಸಿದವು. ಬಣ್ಣ – ಬಣ್ಣದ ಸೀರೆ, ದಾವಣಿಗಳಲ್ಲಿ ಬಾಲಕಿಯರಿದ್ದರೆ, ಕಚ್ಚೆ ಪಂಚೆ, ಜುಬ್ಬಾ ಧರಿಸಿದ ಬಾಲಕರು ಶಿಸ್ತಿನಿಂದ ಭಕ್ತಿಗೀತೆಗಳಿಗೆ ಧ್ವನಿಗೂಡಿಸುತ್ತಾ ಹೆಜ್ಜೆ ಹಾಕುತ್ತಿದ್ದರೆ ದಾರಿಯ ಇಕ್ಕೆಲಗಳಲ್ಲಿ ನಿಂತ ಸಾರ್ವಜನಿಕರೂ ರೋಮಾಂಚಿತರಾದರು. ಭಾವ ಪರವಶರಾಗಿ ಭಕ್ತಿಯಿಂದ ಗಣಪನಿಗೆ ಕೈ ಮುಗಿದರು.
ಪರಿಸರ ಸ್ನೇಹಿ ಗಣಪನ ತಯಾರಿಕೆಗೆ 30 ಕಿಲೋ ನ್ಯೂಸ್ ಪೇಪರ್ 10 ಕೆ. ಜಿ. ಮರಗೆಣಸಿನ ಪುಡಿಯ ಅಂಟು, ಬಣ್ಣಕ್ಕೆ ಇದ್ದಲಿನ ಪುಡಿಯನ್ನು ಉಪಯೋಗಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಜಯಂತ್ ತಿಳಿಸಿದರು. ನಾಲ್ಕು ಮಕ್ಕಳು ಎತ್ತಬಹುದಾದ 40 ಕಿಲೋ ತೂಗುವ ಹಗುರವಾದ ಪರಿಸರ ಸ್ನೇಹಿ ಗಣಪನನ್ನು ಸೆಪ್ಟೆಂಬರ್ 25 ರಂದು ವಿಸರ್ಜಿಸಲಾಗುತ್ತದೆ. ಪ್ರತಿದಿನ ವಿದ್ಯಾರ್ಥಿಗಳು ಶಿಕ್ಷಕರು ಸರದಿಯಂತೆ ಭಾವೈಕ್ಯತೆಯಿಂದ ಗಣೇಶನ ಪೂಜೆ ನೆರವೇರಿಸುತ್ತಾರೆ. ಸಾರ್ವಜನಿಕರು ಈ ಪರಿಸರ ಸ್ನೇಹಿ ಗಣಪನನ್ನು ವೀಕ್ಷಿಸಲು ಸಂಸ್ಥೆಯ ನಿರ್ದೇಶಕಾರದ ಡಾ. ಜಯಂತ್ ರವರು ಮನವಿ ಮಾಡಿದ್ದಾರೆ.
Leave a comment