ದಾವಣಗೆರೆ: ಎಸ್ ಐಆರ್ ಪ್ರಕ್ರಿಯೆಯಿಂದ ಜನಸಾಮಾನ್ಯರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಚುನಾವಣಾ ಅಧಿಕಾರಿಗಳು ಬಂದಾಗ ಜನರು ಆತಂಕದಿಂದ ದೂರ ಸರಿಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಸ್ ಐಆರ್ ಪ್ರಕ್ರಿಯೆಯಿಂದ ನನ್ನ ರೇಷನ್ ಕಾರ್ಡ್ ಹೋಗಬಹುದೇ?, ನನ್ನ ಮತದಾನದ ಹಕ್ಕು ಕಳೆದುಹೋಗಬಹುದೇ?, ‘ಸರ್ಕಾರದ ಯೋಜನೆಗಳು ನಿಲ್ಲಬಹುದೇ? ಎಂಬ ಭಯ ಜನರಲ್ಲಿ ಮೂಡಿತ್ತು ಎಂದು ಶಾಸಕ ಸಮರ್ಥ್ ಶಾಮನೂರು ಹೇಳಿದರು.
ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಮತದಾರರ ಪಟ್ಟಿಯಿಂದ ದೊಡ್ಡ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳ ಕುರಿತು ಮಾತನಾಡಿದ ಅವರು, ಜನರ ಮತದಾನದ ಹಕ್ಕು ಮತ್ತು ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆಗೆ ಪಾರದರ್ಶಕ ವ್ಯವಸ್ಥೆ ಅಗತ್ಯವಿದೆ. ಈ ವಿಚಾರದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದರು.
ಸಂವಿಧಾನವನ್ನು ರಕ್ಷಿಸಬೇಕಾದ ಸಂಸ್ಥೆಗಳು ತಮ್ಮ ಜವಾಬ್ದಾರಿಯನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಬೇಕು. ಯಾವುದೇ ಸಂಸ್ಥೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದು ಯಾವುದೇ ಒಂದು ಪಕ್ಷದ ಹೋರಾಟವಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ರಕ್ಷಣೆಗೆ ನಡೆಯುತ್ತಿರುವ ಹೋರಾಟವಾಗಿದೆ. ಎಲ್ಲಾ ಪಕ್ಷಗಳು ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವವರು ಒಂದಾಗಿ ಹೋರಾಡಬೇಕಿದೆ ಎಂದು ಅವರು ಕರೆ ನೀಡಿದರು.
ಹಿಂದೆಯೂ ನೀಟ್ ಸೇರಿದಂತೆ ಹಲವು ಜನಪರ ವಿಚಾರಗಳಲ್ಲಿ ನಡೆದ ಹೋರಾಟಗಳು ಪರಿಣಾಮ ಬೀರಿವೆ. ಜನರ ಧ್ವನಿ ಒಗ್ಗಟ್ಟಾಗಿ ಕೇಳಿಸಿದಾಗ ಸರ್ಕಾರಗಳು ಸ್ಪಂದಿಸಬೇಕಾಗುತ್ತದೆ. ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಶಾಸಕ ಸಮರ್ಥ್ ಶಾಮನೂರು ಹೇಳಿದರು.
ಪ್ರತಿಭಟನೆಯಲ್ಲಿ ಶಾಸಕ ಸಮರ್ಥ್ ಶಾಮನೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಇಬ್ರಾಹಿಂ ಖಲೀಲ್ ಉಲ್ಲಾ, ಮುಖಂಡರುಗಳಾದ ಡಿ.ಬಸವರಾಜ್,ಕೆ.ಜಿ ಶಿವಕುಮಾರ್,ಮಾಗಾನಹಳ್ಳಿ ಪರಶುರಾಮ್, ಹದಡಿ ನಿಂಗಪ್ಪ,ಕೆ.ಚಮನ್ ಸಾಬ್, ಸಯೀದ್ ಚಾರ್ಲಿ, ಕೆ.ಪಿ ಪಾಲಯ್ಯ, ಮಹಿಳಾ ಮುಖಂಡರು ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
Leave a comment