ದಾವಣಗೆರೆ: ಭದ್ರಾ ಜಲಾಶಯದಿಂದ ಇಂದು ರಾತ್ರಿಯಿಂದ ನೀರು ಹರಿಸುವ ನಿರ್ಧಾರದ ಪತ್ರವನ್ನು ಕಾರಿಗನೂರಿಗೆ ತ್ಯಾವಣಿಗೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮೇಶ್ ಆಗಮಿಸಿ ನೀಡಿದ್ದಾರೆ. ಯಾವುದೇ ಸರ್ಕಾರ ರೈತರ ಹೋರಾಟಕ್ಕೆ ಮಣಿಯಲೇಬೇಕಾಗುತ್ತದೆ ಎಂಬುದು ಇದರಿಂದ ಪುನಃ ಸಾಬೀತಾಗಿದೆ ಎಂದು ರೈತ ಮುಖಂಡ ತೇಜಸ್ವಿ ವಿ. ಪಟೇಲ್ ತಿಳಿಸಿದ್ದಾರೆ.
ಶಾಂತಿಸಾಗರದಲ್ಲಿ ನಡೆದ ಧರಣಿ, ಮಲೇಬೆನ್ನೂರಿನಲ್ಲಿ ನಡೆದ ಒತ್ತಾಯ ಹಾಗೂ ದಾವಣಗೆರೆಯಲ್ಲಿ ನಡೆದ ಹೋರಾಟಗಳ ಫಲವೇ ನೀರು ಹರಿಸುವ ಆದೇಶ ಹೊರಬಿದ್ದಿದೆ. ಸೂಳೆಕೆರೆಯಲ್ಲಿ ನಡೆದ ಧರಣಿಗೆ ಹಾಗೂ ದಾವಣಗೆರೆಯ ಹೋರಾಟಕ್ಕೆ ನೂರಾರು ಟ್ರ್ಯಾಕ್ಟರ್ಗಳಲ್ಲಿ ಬಂದಿದ್ದ ರೈತರಿಗೆ ಅಭಿನಂದನೆ ಸಲ್ಲಿಸಿದ ಅವರು, ಡಿಸೆಂಬರ್ವರೆಗೂ ಈಗ ಹರಿಸುವ ನೀರನ್ನು ಸಂಗ್ರಹಿಸಿ ಉಪಯೋಗಿಸಬೇಕು. ಬೆಳೆಗಳಿಗೆ ನೀರು ಹರಿಸಬಾರದು ಎಂಬ ಅಂಶದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ನೀರು ಹರಿಸುವ ಪ್ರಕಟಣೆಯಲ್ಲಿ ಆ ಅಂಶವನ್ನು ಸೇರಿಸಿಯೇ ಹೊರಡಿಸಬೇಕಿದೆ ಎಂದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ಒಂದು ವೇಳೆ ಮಳೆ ಬಾರದಿದ್ದರೆ ಮುಂದೆ ಅಗತ್ಯ ಬಿದ್ದಾಗ ನೀರು ಹರಿಸುವಂತೆ ಬೇಡಿಕೆ ಇಡಬಹುದು. ಭದ್ರಾ ಜಲಾಶಯದಿಂದ ನೀರು ಹರಿಯುವಂತೆ ಆಗುವಲ್ಲಿ ಶ್ರಮವಹಿಸಿದ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ರೈತರು ಮತ್ತು ಜಾನುವಾರುಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಮರ್ಪಕವಾಗಿ ವರದಿ ಸಲ್ಲಿಸಿರುವ ಜಲ ಸಂಪನ್ಮೂಲ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ವಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಭದ್ರಾ ನಾಲೆಗಳಲ್ಲಿ ನೀರು ಹರಿಯಲು ಆರಂಭವಾದ ಮೇಲೆ ಒಮ್ಮೆ ನೀರು ಹರಿಸಿಕೊಂಡ ರೈತರು ಕೆಳಭಾಗದ ರೈತರಿಗೆ ನೀರು ತಲುಪಲು ಸಹಕರಿಸಬೇಕು. ಪದೇ ಪದೇ ಹರಿಸಿಕೊಳ್ಳುವ ಕೆಟ್ಟ ಅಭ್ಯಾಸವನ್ನು ಕೈಬಿಡಬೇಕು. ನಾಲೆಗಳ ಕೊನೆಭಾಗದ ರೈತರಿಗೆ ನೀರು ತಲುಪದಿದ್ದರೆ ನಡೆಸಿದ ಹೋರಾಟಗಳು ವಿಫಲವಾದಂತಾಗುತ್ತವೆ. ಹಾಗಾಗಿ ರೈತರು ರೈತರಿಗೆ ಸಹಕಾರ ತೋರಬೇಕು ಎಂದು ಮನವಿ ಮಾಡಿದ್ದಾರೆ.
ಉಪವಿಭಾಗದ ಎಇಇ ಆದೇಶದ ಪತ್ರ ನೀಡಿದ ಸಂದರ್ಭದಲ್ಲಿ ಸಹಾಯಕ ಎಂಜಿನಿಯರ್ ತಿಪ್ಪೇಸ್ವಾಮಿ, ಕಾರಿಗನೂರಿನ ಕೊಂಪೇರ್ ಬಸವರಾಜಪ್ಪ, ಹಲಿಗೆರೆ ಮಲ್ಲಿಕಾರ್ಜುನಪ್ಪ, ಗೌಡ್ರು ತಿಪ್ಪೇಸ್ವಾಮಿ ಹಾಗೂ ಮಲ್ಲೇಶ್ ನಾಯ್ಕ್ ಉಪಸ್ಥಿತರಿದ್ದರು.
Leave a comment