ದಾವಣಗೆರೆ: ನಾನು ರಾಜಕೀಯಕ್ಕೆ ಯಾಕೆ ಬಂದೆ ಎಂದು ಬೇಸರವಾಗುತ್ತಿದೆ. ಹಿರಿಯ ಶಾಸಕರ ಪದ ಬಳಕೆ ನೋವು ತಂದಿದೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಬಿಜೆಪಿ ಶಾಸಕ ಬಿ. ಪಿ. ಹರೀಶ್ ಅವರು ಮಾತನಾಡಿರುವ ರೀತಿ ಹಾಗೂ ಬಳಸಿರುವ ಪದ ಬಳಕೆ ಯಾವ ಸಂದೇಶ ನೀಡುತ್ತದೆ? ಮಾಧ್ಯಮಗಳಲ್ಲಿ ನೋಡಿದಾಗ ಮನಸ್ಸಿಗೆ ತುಂಬಾನೇ ಬೇಸರವಾಯಿತು. ರಾಜಕೀಯಕ್ಕೆ ಯಾಕೆ ಬರಬೇಕಿತ್ತೆಂದು ಈಗ ಅನಿಸುತ್ತಿದೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಹಾಗೂ ಸಿಎಂ ಡಿ. ಕೆ. ಶಿವಕುಮಾರ್ ಆಪ್ತ ಶಿವಗಂಗಾ ಬಸವರಾಜ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ನಾಯಕರಿಬ್ಬರ ಪದ ಬಳಕೆ ಈ ಹಂತಕ್ಕೆ ಹೋಗಿರುವುದು ಬೇಸರ ತರಿಸಿದೆ ಎಂದು ಹೇಳಿದರು.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸಹಜ. ಆರೋಪ ಪ್ರತ್ಯಾರೋಪ ಸಾಮಾನ್ಯ. ಆದರೆ ಕೆಟ್ಟ ಪದಗಳ ಬಳಕೆ, ತಂದೆ ಹೆಸರು ಬಳಕೆ ಸರಿಯಲ್ಲ. ಯಾವುದೇ ಸಮುದಾಯವಿದ್ದರೂ ಇಂಥ ವರ್ತನೆ ಸರಿಯಲ್ಲ. ತಂದೆ, ಕುಟುಂಬ ವಿಚಾರಕ್ಕೆ ಯಾರೂ ಬರಬಾರದು. ಈಗ ಆಗಿರುವ ಘಟನೆಗೆ ವಿಷಾದ ಇದೆ. ಮನಸ್ಸಿಗೆ ಬೇಸರ ಆಗಿದೆ ಎಂದು ತಿಳಿಸಿದರು.
ನಾವು ಸಹ ಆಡು ಭಾಷೆಯಲ್ಲಿ ಮಾತನಾಡುತ್ತೇವೆ. ಇಂಥ ಪದ ಪ್ರಯೋಗ ನಮಗೂ ಮಾಡಿದರೆ ಹೇಗೆ ಎಂಬ ಭಯವಾಗುತ್ತಿದೆ. ಹಿರಿಯರನ್ನು ನಾವು ಫಾಲೋ ಮಾಡಬೇಕು. ಒಳ್ಳೆಯದು ಮಾಡಿದ್ರೂ ಸಹ, ಕೆಟ್ಟದು ಮಾಡಿದ್ರೂ ಸಹ ಎಂಬಾತಾಗಿಬಿಡುತ್ತದೆ. ಇಬ್ಬರೂ ಹಿರಿಯರು. ಮೊದಲು ಯಾರು ಮಾತನಾಡಿದರೂ ಆಮೇಲೆ ಯಾರೂ ಮಾತನಾಡಿದರು ಎಂಬುದು ಮುಖ್ಯವಲ್ಲ. ಎರಡೂ ಪಕ್ಷಗಳ ಹೈಕಮಾಂಡ್ ಇಬ್ಬರಿಗೂ ವೈಯಕ್ತಿಕ, ಕುಟುಂಬದ ಟೀಕೆ ಮಾಡಬಾರದು ಎಂದು ಕಟ್ಟಪ್ಪಣೆ ವಿಧಿಸಬೇಕು. ಇಬ್ಬರನ್ನೂ ಕರೆಸಿ ಮಾತನಾಡಿ ಸಮಸ್ಯೆ ಪರಿಹರಿಸಬೇಕು ಎಂದು ಹೇಳಿದರು.
ರಾಜಕೀಯವಾಗಿ ಮಾತನಾಡಲಿ. ವೈಯಕ್ತಿಕ ಪದಗಳ ಬಳಕೆ ಬೇಡ. ಒಳಗಡೆ ಕೂತು ಮಾತನಾಡಲಿ. ಹೈಕಮಾಂಡ್ ಈ ಕೆಲಸ ಮಾಡಲೇಬೇಕು. ಬಿಜೆಪಿಯವರಿಗೆ ಪ್ರತಿಭಟನೆ, ಹೋರಾಟ ಮಾಡುವುದು ಹಕ್ಕು. ಪ್ರತಿಭಟನೆ ನಡೆಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಸಚಿವರು ಇದಕ್ಕೆ ಉತ್ತರ ನೀಡುತ್ತಾರೆ. ದಾವಣಗೆರೆಯಲ್ಲಿ ರಾಜಕೀಯ ಕಲುಷಿತವಾಗದಂತೆ ನೋಡಿಕೊಳ್ಳಬೇಕಿದೆ ಎಂದು ಶಿವಗಂಗಾ ಬಸವರಾಜ್ ಅಭಿಪ್ರಾಯಪಟ್ಟಿದ್ದಾರೆ.
Leave a comment