ದಾವಣಗೆರೆ: ವಿಶ್ವೇಶ್ವರಯ್ಯ ಜಲ ನಿಗಮವು ಸರ್ಕಾರದ ಆದೇಶದನ್ವಯ ಸೆ.6ರಿಂದ ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದೆ. ದಾವಣಗೆರೆ ಜಿಲ್ಲೆಯ ರೈತರು ನೀರು ಹರಿಸುವಂತೆ ಒತ್ತಾಯಿಸಿದ್ದರೂ ಕ್ಯಾರೇ ಎನ್ನದ ರಾಜ್ಯ ಸರ್ಕಾರವು ಬೆಣ್ಣೆನಗರಿಗೆ ಬೆಣ್ಣೆ ಸವರಿ ಚಿತ್ರದುರ್ಗಕ್ಕೆ ನೀರು ಹರಿಸುತ್ತಿರುವುದು ಭದ್ರಾ ಅಚ್ಚುಕಟ್ಟು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಜ್ಜಂಪುರ ಮುಖಾಂತರ ಚಿತ್ರದುರ್ಗ ಶಾಖಾ ಕಾಲುವೆ ಚೈ0.00 ಕಿ.ಮೀ. ನಿಂದ ಚೈ.114.142 ಕಿಮೀ ವರೆಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ: ಕಡೂರು ತಾಲೂಕು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹೊಳಲ್ಕೆರೆ ಹಿರಿಯೂರು ಚಿತ್ರದುರ್ಗ ಚಳ್ಳಕೆರೆ ತಾಲೂಕುಗಳ ಮೂಲಕ ಗೋನೂರು ಕೆರೆಯವರೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು ಉದ್ದೇಶಿಸಲಾಗಿದೆ.
ದಾವಣಗೆರೆ ಲೈವ್ WhatsApp Group
ಜಾಯಿನ್ ಆಗಿ
ದಾವಣಗೆರೆ ಜಿಲ್ಲೆಯ ರೈತರು ಭತ್ತ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿದ್ದರೂ ರಾಜ್ಯ ಸರ್ಕಾರ ಮಾತ್ರ ಕ್ರಮ ಕೈಗೊಂಡಿಲ್ಲ. ಇದು ದ್ರೋಹದ ಕೆಲಸ. ಚಿತ್ರದುರ್ಗಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ. ದಾವಣಗೆರೆ ಜಿಲ್ಲೆಯ ರೈತರಿಗೆ ನೀಡಿ ಅಲ್ಲಿಗೂ ನೀಡಲಿ. ಭದ್ರಾ ಡ್ಯಾಂನಲ್ಲಿ 178 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದ್ದರೂ ನೀರು ಹರಿಸದಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ರೈತರು ಕೆಂಡಾಮಂಡಲರಾಗಿದ್ದಾರೆ. ದಾವಣಗೆರೆ ಬಂದ್, ಹೋರಾಟ ನಡೆಸಿದರೂ ಪ್ರಯೋಜನ ಮಾತ್ರ ಶೂನ್ಯ.
ಆದ್ದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳದ ಪಾತ್ರಗಳಲ್ಲಿ ಸಾರ್ವಜನಿಕರು ತಿರುಗಾಡುವುದು. ಜನ ಜಾನುವಾರುಗಳನ್ನು ಕಾಲುವೆ ಒಳಗಡೆ ಬಿಡುವುದು ಕಾಲುವೆ / ಹಳ್ಳಗಳಲ್ಲಿ ಈಜಾಡುವುದು ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಈ ಸೂಚನೆಗಳನ್ನು ಉಲ್ಲಂಘಿಸುವುದು. ನಿಗಮದ ಆಸ್ತಿಯಾದ ನೀರಾವರಿ ಕಾಲುವೆ. ಕಟ್ಟಡಗಳನ್ನು ಜಖಂಗೊಳಿಸುವುದು, ಅನಧಿಕೃತವಾಗಿ ಪಂಪ್ಸೆಟ್ ಗಳನ್ನು ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ಪ್ರಕಾರ ಕಾನೂನು ಬಾಹಿರವಾಗಿದ್ದು, ಇದನ್ನು ಉಲ್ಲಂಘಿಸಿದವರ ವಿರುದ್ಧ ನೀರಾವರಿ ಕಾಯ್ದೆ ಮತ್ತು ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಬಿ.ಆರ್.ಪ್ರಾಜೆಕ್ಟ್ ವಿಶ್ವೇಶ್ವರಯ್ಯ ಜಲನಿಗಮ, ಭದ್ರಾ ಮೇಲ್ದಂಡೆ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a comment