ದಾವಣಗೆರೆ : ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ 9 ದಿನಗಳ ಕಾಲ ಅದ್ದೂರಿಯಾಗಿ ನಡೆಯುವ ತರಳಬಾಳು ಹುಣ್ಣಿಮೆಗೆ ಕೆಲ ದುಷ್ಕರ್ಮಿಗಳಿಂದ ಭಂಗ ತಂದಿದೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಉಜ್ಜಿನಿ ಪೀಠದ ಭಕ್ತರು, ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಪೀಠದ ಭಕ್ತರ ನಡುವೆ ಮಾರಾಮಾರಿ ನಡೆದಿರುವ ಘಟನೆ ಉಜ್ಜಿನಿ ಬಳಿ ಇರುವ ಕಾಳಾಪುರ ಗ್ರಾಮದಲ್ಲಿ ಶನಿವಾರ ಸಂಜೆ ಏಳು ಗಂಟೆ ಹೊತ್ತಿಗೆ ನಡೆದಿದೆ. ಈ ವೇಳೆ ಕಲ್ಲು ತೂರಾಟ ಕೂಡ ನಡೆದಿದೆ.
ಅಲ್ಲದೇ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಘಟನಾ ಸಂಬಂಧ ಇಬ್ಬರು ಮಹಿಳೆಯರು, ಪೊಲೀಸ್ ಪೇದೆ ಸೇರಿ ನಾಲ್ವರಿಗೆ ಗಾಯಗಳಾಗಿವೆ. ಜತೆಗೆ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಅಲ್ಲದೇ ಕಾಳಾಪುರ ಗ್ರಾಮದ ಬಸಕ್ಕ ಸೇರಿ ನಾಲ್ವರು ಗಾಯಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಪೇದೆ ಲಿಂಗಯ್ಯ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಮನೆಯಲ್ಲಿದ್ದವರಿಗೆ ಬಂದು ಹೊಡೆದಿದ್ದಾರೆಂದು ಗಾಯಾಳುಗಳು ಆರೋಪಿಸಿದ್ದಾರೆ. ದಾಳಿಯ ವೇಳೆ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪವು ಬಂದಿದೆ.
ತರಳಬಾಳು ಹುಣ್ಣಿಮೆ ಸಂಬಂಧ ದಾವಣಗೆರೆಯಿಂದ ಶಿವಸೈನ್ಯ ಸಂಘಟನೆ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಂಡಿತ್ತು. ಈ ರ್ಯಾಲಿಗೆ ದಾವಣಗೆರೆಯಲ್ಲಿ ಚಾಲನೆ ಸಿಕ್ಕಿತ್ತು. ನಂತರ ಸಿರಿಗೆರೆಗೆ ಹೋಗಿ ಅಲ್ಲಿಂದ ಕೊಟ್ಟೂರು ಮಾರ್ಗವಾಗಿ ಹೋಗಲಾಗಿತ್ತು. ಹೀಗಿರುವಾಗ ಸಿರಿಗೆರೆ ಮಠದ ಭಕ್ತರು ಹಮ್ಮಿಕೊಂಡ ಬೈಕ್ ರಾಲಿ ಕಾಳಾಪುರ ಪ್ರವೇಶ ಮಾಡಿದಾಗ ಬೈಕ್ ರಾಲಿಯಲ್ಲಿ ಪಾಲ್ಗೊಂಡವರು ಹಾಗೂ ಕಾಳಾಪುರ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ.
ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿಮಾಡಿ, ದುಷ್ಕರ್ಮಿಗಳ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಸದ್ಯ ಕಾಳಾಪುರದಲ್ಲಿ ಶಾಂತಿ ಸುವ್ಯವಸ್ಥೆ ಇದ್ದು, ಯಾವುದೇ ಸಮಸ್ಯೆ ಇಲ್ಲ. ಆದರೆ ಗ್ರಾಮದಲ್ಲಿ ಪೊಲೀಸರು ಬೀಡು ಬಿಟ್ಟಿದ್ದು, ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಎಸ್ಪಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ. ಸದ್ಯಕ್ಕೆ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ ಎಂದು ವಿಜಯನಗರ ಡಿಸಿ ವೆಂಕಟೇಶ ಹೇಳಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228