ದಾವಣಗೆರೆ, ಮೇ 14: ದಾವಣಗೆರೆ ನಗರದ ಲಾಯರ್ ರಸ್ತೆಯಲ್ಲಿರುವ ಸಿ.ಎಸ್.ಬಿ. ಬ್ಯಾಂಕ್‌ನಲ್ಲಿ ನಡೆದ ಚಿನ್ನದ ಕಳ್ಳತನ ಪ್ರಕರಣವು ‘ಲಕ್ಕಿ ಭಾಸ್ಕರ್’ ಚಿತ್ರದ ಕತೆಯನ್ನೇ ಹೋಲುವಂತೆ ಬೆಳಕಿಗೆ ಬಂದಿದೆ.
ಬ್ಯಾಂಕ್‌ನ ಸಿಬ್ಬಂದಿಯಾದ ಸಂಜಯ್ ಟಿ.ಪಿ. ಎಂಬಾತ 1.86 ಕೋಟಿ ರೂ. ಮೌಲ್ಯದ 3 ಕೆ.ಜಿ. ಚಿನ್ನಾಭರಣಗಳನ್ನು ಕದ್ದು, ಆನ್‌ಲೈನ್ ಗೇಮಿಂಗ್‌ನಲ್ಲಿ ತೊಡಗಿಕೊಂಡು, ಗೋವಾ ಸೇರಿದಂತೆ ವಿವಿಧ ಕಡೆ ಸಂಚರಿಸಿ ಐಷಾರಾಮಿ ಜೀವನ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಕೆ.ಟಿ.ಜೆ. ನಗರ ಪೊಲೀಸರು ಆರೋಪಿಯನ್ನು ಬಂಧಿಸಿ, ಕದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಸಂಜಯ್ ಟಿ.ಪಿ. ಬ್ಯಾಂಕ್‌ನಲ್ಲಿ ಅಡಮಾನ ಚಿನ್ನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ. ಬ್ಯಾಂಕ್ ಅಧಿಕಾರಿಗಳ ಸಂಪೂರ್ಣ ವಿಶ್ವಾಸ ಗಳಿಸಿದ್ದ ಇವನು, 3 ಕೆ.ಜಿ. ಚಿನ್ನವನ್ನು ಕದ್ದಿದ್ದಾನೆ. ಇದಕ್ಕೂ ಮೊದಲು ಸ್ನೇಹಿತರ ಮೂಲಕ ನಕಲಿ ಚಿನ್ನವನ್ನು ಅಡಮಾನವಿಟ್ಟು 1.5 ಕೋಟಿ ರೂ. ಸಾಲ ಪಡೆದಿದ್ದ. ಈ ಹಣವನ್ನು ಆನ್‌ಲೈನ್ ಗೇಮಿಂಗ್‌ನಲ್ಲಿ ಖರ್ಚು ಮಾಡಿದ್ದಾನೆ. ಇದರ ಜೊತೆಗೆ ಕದ್ದ ಚಿನ್ನವನ್ನು ಬೇರೆ ಬ್ಯಾಂಕ್‌ಗಳಲ್ಲಿ ಅಡಮಾನವಿಟ್ಟು ಹೆಚ್ಚಿನ ಹಣ ಪಡೆದಿದ್ದ.
ಪ್ರಕರಣವು ಬ್ಯಾಂಕ್‌ನ ಲೆಕ್ಕಪರಿಶೀಲನೆ ವೇಳೆ ಬೆಳಕಿಗೆ ಬಂದಿತು. ಲಾಕರ್ ಕೀ ನೀಡಲು ಸಂಜಯ್ ನಿರಾಕರಿಸಿ, ಬ್ಯಾಂಕ್‌ನಿಂದ ಪರಾರಿಯಾದ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆಯಿಂದ ಕೃತ್ಯ ದೃಢಪಟ್ಟಿತು. ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಯನ್ನು ಬಂಧಿಸಲಾಯಿತು. ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕೆ.ಟಿ.ಜೆ. ನಗರ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ‘ಲಕ್ಕಿ ಭಾಸ್ಕರ್’ ಚಿತ್ರದಂತೆ ಚಿನ್ನ ಕದ್ದು ಹೂಡಿಕೆ ಮಾಡಿ ಐಷಾರಾಮಿ ಜೀವನ ನಡೆಸಲು ಯತ್ನಿಸಿದ ಸಂಜಯ್‌ನ ಕೃತ್ಯ ನಗರದಲ್ಲಿ ಚರ್ಚೆಗೆ ಕಾರಣವಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228