ದಾವಣಗೆರೆ, ಮೇ 13, 2025: ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 48ರ ಹೆಬ್ಬಾಳು ಗ್ರಾಮದ ಟೋಲ್ಗೇಟ್ ಬಳಿ ಕರ್ತವ್ಯದಲ್ಲಿದ್ದ ಜಿಲ್ಲಾ ಸಶಸ್ತ್ರ ಮೀಸಲು (DAR) ಪಡೆಯ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ (33) ಅವರು ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಘಟನೆಯ ಬಗ್ಗೆ ತಿಳಿದ ಕೂಡಲೇ ಜಿಲ್ಲಾ ಪೊಲೀಸ್ ಅಧೀಕ್ಷಕರು (ಎಸ್ಪಿ) ಉಮಾ ಪ್ರಶಾಂತ್ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ.
ಮೂಲತಃ ಬಾಗಲಕೋಟೆ ಜಿಲ್ಲೆಯ ಹಿಬ್ಬರಗಿ ಇಂಡಿ ಗ್ರಾಮದ ನಿವಾಸಿಯಾಗಿದ್ದ ರಾಮಪ್ಪ ಪೂಜಾರ್, ದಾವಣಗೆರೆಯ DAR ಘಟಕದಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಘಟನೆಯ ದಿನ, ಹೆಬ್ಬಾಳು ಟೋಲ್ಗೇಟ್ ಬಳಿ ಟ್ರಾಫಿಕ್ ನಿಯಂತ್ರಣ ಮತ್ತು ವಾಹನ ತಪಾಸಣೆಗಾಗಿ ಲೈನ್ ಡಿಸಿಪ್ಲಿನ್ ಡ್ಯೂಟಿಗೆ ನಿಯೋಜಿಸಲಾಗಿತ್ತು. ಈ ವೇಳೆ, ಲಾರಿಯೊಂದನ್ನು ನಿಲ್ಲಿಸಲು ಸೂಚನೆ ನೀಡಿದಾಗ, ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ರಾಮಪ್ಪ ಅವರ ಮೇಲೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಮಪ್ಪ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆಯ ನಂತರ, ಲಾರಿ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ಟೋಲ್ಗೇಟ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಲಾರಿಯ ಸಂಖ್ಯೆ ಮತ್ತು ಚಾಲಕನ ಗುರುತು ಪತ್ತೆಹಚ್ಚುವ ಕಾರ್ಯವನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ದಾವಣಗೆರೆಲೈವ್ gmail
» Whatsapp Number
95903247228