Davanagere Live News | Kannada News | 06-06-2023
ದಾವಣಗೆರೆ: ದೇವನಗರಿ, ಬೆಣ್ಣೆ ನಗರಿ, ವಾಣಿಜ್ಯ ನಗರಿ ಎಂದು ಬಿರುದು ಪಡೆದಿರುವ ದಾವಣಗೆರೆ ಹಲವು ಅಪರೂಪದ ಪಕ್ಷಿಗಳಿಗೆ ಆಶ್ರಯ ತಾಣ ಎಂಬುದೇ ವಿಶೇಷ. ಅಷ್ಟೇ ಅಲ್ಲ ಅಪರೂಪದ ನಾಲ್ಕು ಬಗೆಯ ಗಿಳಿಗಳು (Parrots Davangere) ನಮ್ಮ ನಿಮ್ಮ ಮಧ್ಯೆ ಇವೆ ಎಂಬುದೇ ಹೆಮ್ಮೆ.
ಸೋಮವಾರ ಇಲ್ಲಿನ ಜನತಾ ಬಜಾರ್ ಟರೇಸ್ ಮೇಲೆ ‘ ದಾವಣಗೆರೆ ಗಿಳಿವಿಂಡು ಬಳಗ’ ದಿಂದ ಗಿಳಿವಿಂಡು ನೋಡೋಣ ಬನ್ನಿ ಎಂಬ ಅಪರೂಪದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಕ್ಷಿ ಪ್ರಪಂಚತ ಹಲವು ಕೌತುಕಗಳ ಬಗ್ಗೆ ಬೆಳಕು ಚೆಲ್ಲುವ ಮೂಲಕ ಕಾರ್ಯಕ್ರಮ ಯಶಸ್ವಿ ಆಯಿತು. ದಾವಣಗೆರೆ ನಗರದ ಪರಿಸರ ಮತ್ತು ಪಕ್ಷಿಪ್ರೇಮಿಗಳೆಲ್ಲ ಒಂದೆಡೆ ಸೇರಿದ್ದರು.
ದಾವಣಗೆರೆ ನಗರ ತನ್ನೊಡಲಲ್ಲಿ ಲಕ್ಷಾಂತರ ಗಿಳಿಗಳಿಗೆ ಆಸರೆ ತಾಣವಾಗಿದೆ. ದಾವಣಗೆರೆ ನಗರದ ಮಧ್ಯದ ನಗರ ಪಾಲಿಕೆ ಹಿಂದಿನ ಹತ್ತಾರು ಮರಗಳಲ್ಲಿ ಹಿಂಡು ಹಿಂಡು ಗಿಳಿಗಳು ವಾಸಿಸುತ್ತವೆ. ಅವುಗಳ ರಕ್ಷಣೆ ಆಗಬೇಕಿದೆ ಎಂಬುದು ಪಕ್ಷಿ ಪ್ರೇಮಿಗಳ ಒಕ್ಕೊರಲ ಆಶಯವಾಗಿತ್ತು.
ದಾವಣಗೆರೆ ಸಲೀಂ ಆಲಿ ಎಂದೇ ಹೆಸರಾದ ಡಾ. ಶಿಶುಪಾಲ ಅವರಿಂದ ಪಕ್ಷಿ ಪ್ರಪಂಚದ ಬಗ್ಗೆ ಪಾಠ
(Parrots davangere): ದಾವಣಗೆರೆ ಸಲೀಂ ಆಲಿ ಎಂದೇ ಹೆಸರಾದ ಡಾ. ಶಿಶುಪಾಲ ಅವರು ಪಕ್ಷಿ ಸಂಕುಲದ ಹಲವು ವಿಚಾರಗಳ ಬಗ್ಗೆ ವಿವರಿಸಿದರು. ಪಕ್ಷಿ ಸಂಕುಲದ ರಕ್ಷಣೆ ಬಗ್ಗೆ ನಾಗರಿಕ ಸಮಾಜ ಅನುಸರಿಸುವ ಕ್ರಮಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಪಕ್ಷಿ ಪ್ರೇಮಿಗಳು ಸಂಜೆ ಜನತಾ ಬಜಾರಿನ ಟರೇಸ್ ಮೇಲೆ ಹಲವು ಪಕ್ಷಿಗಳನ್ನು ನೋಡಿ ಸಂಭ್ರಮಿಸಿದರು.
ದೂರದಿಂದ ಬಂದ ಗಿಳಿಗಳ ಹಿಂಡು !
ಪರಿಸರ ದಿನಾಚರಣೆಯ ನೆಪದಲ್ಲಿ ಇಲ್ಲಿ ಗಿಳಿವಿಂಡು ಬಳಗ ಗಿಳಿಗಳ ವೀಕ್ಷಣೆ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದು ವಿಶೇಷವಾಗಿತ್ತು. ಸಂಜೆಯಾಗುತಿದ್ದಂತೆ 39-40 ಕಿಮೀ ದೂರದಿಂದ ಗುಂಪು ಗುಂಪಾಗಿ ಆಗಮಿಸಿದ ಗಿಳಿಗಳ ಬಳಗ ನೆರೆದಿದ್ದ ಆಸಕ್ತರ ಕಣ್ಮನ ಸೆಳೆದವು.
ದಾವಣಗೆರೆಯಲ್ಲಿ ಇವೆ 262 ಪಕ್ಷಿ ಪ್ರಭೇದಗಳು
ದಾವಣಗೆರೆಯಲ್ಲಿ ಕಾಗೆ, ಗುಬ್ಬಿ ಸೇರಿದಂತೆ 262 ಪಕ್ಷಿ ಪ್ರಭೇದಗಳಿವೆ. ನಾಲ್ಕು ಪ್ರಭೇದದ ಗಿಳಿಗಳಿದ್ದು, ಗುಲಾಬಿ ಕೊರಳ ಪಟ್ಟಿಯ ಗಿಳಿಗಳು ಹೆಚ್ಚಾಗಿ ಕಂಡುಬರುತ್ತವೆ ಎಂದು ಶಿಶುಪಾಲ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ವೀರೇಶ್, ಮೇಯರ್ ವಿನಾಯಕ ಪೈಲ್ವಾನ್, ಸದಾನಂದ ಹೆಗ್ಗಡೆ, ಜನತಾಬಜಾರಿನ ಗುರುಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.