ದಾವಣಗೆರೆ: ಗಂಡ, ಹೆಂಡತಿ ಜಗಳ ಉಂಡು ಮಲಗುವವರೆಗೆ ಎಂಬ ಗಾದೆ ಇದೆ. ಅದರಂತೆ ಸಂಸಾರ ನಡೆದರೆ ಛಂದ. ಆದರೆ ಇಲ್ಲೊಂದು ಘಟನೆಯಲ್ಲಿ ಗಂಡ, ಹೆಂಡಿರ ಜಗಳ ಸಾವಿನ ವರೆಗೆ ಹೋಗಿದ್ದು, ಮೂವರು ಕಂದಮ್ಮಗಳು ತಬ್ಬಲಿಗಳಾಗಿದ್ದಾರೆ.
ಮೂರು ಮಕ್ಳಳ ಸ್ಥಿತಿ ಕಂಡ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಪತ್ನಿಯನ್ನು ಕೊಂದ ಪತಿ ತಾನು ಕೂಡ ಆತ್ಮಹತ್ಯೆಗೆ ಶರಣಾಗಿದ್ದು, ಮೂವರು ಮಕ್ಕಳು ಅನಾಥವಾಗಿವೆ.
ಅಡುಗೆ ವಿಚಾರವಾಗಿ ಪತ್ನಿ ಚೌಡಮ್ಮ ಹಾಗೂ ಪತಿ ಹನುಮಂತಪ್ಪನ ನಡುವೆ ಜಗಳವಾಗಿದ್ದು, ಚೌಡಮ್ಮನ್ನು ಥಳಿಸಿದ್ದಾನೆ. ಇದರಿಂದ ನೊಂದ ಆಕೆ ತವರು ಮನೆಗೆ ಹೊರಟಿದ್ದು, ಹಿಂದೆ ಹಿಂಬಾಲಿಸಿದ ಪತಿ ಆಕೆಯನ್ನು ಜಮೀನಿಗೆ ಕರೆದುಕೊಂಡು ಹೋಗಿ ಮತ್ತೆ ಬಾರುಕೋಲಿನಿಂದ ಥಳಿಸಿದ್ದಾನೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಕೊಲೆ ಮಾಡಿದ್ದಾನೆ ಎಂದು ಚೌಡಮ್ಮನ ಪಾಲಕರು ದೂರಿದ್ದಾರೆ. ಪತಿ ಸಾವಿನ ನಂತರ ಹನುಮಂತಪ್ಪ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ದಾನೆ.