ಚನ್ನಗಿರಿ: ಮೂಕ ಪ್ರಾಣಿಗಳು ತಮ್ಮ ಮಾಲೀಕರ ಮೇಲೆ ಅಪಾರ ಪ್ರೀತಿ ಹೊಂದಿರುವ ಹಲವು ನಿದರ್ಶನಗಳನ್ನು ನಿತ್ಯ ಜೀವನದಲ್ಲಿ ನೋಡುತ್ತೇವೆ. ಅದರಂತೆ ಇಲ್ಲೊಂದು ಗೋವು ಜೀವದ ಹಂಗು ತೊರೆದು ತನ್ನ ಮಾಲೀಕ ಜೀವ ರಕ್ಷಣೆ ಮಾಡಿದ ಅಪರೂಪದ ಘಟನೆ ನಡೆದಿದೆ.
ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಕಿಕೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಬುಧವಾರ ಹಸುವೊಂದು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ರಕ್ಷಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.
ಕೊಡಕಿಕೆರೆ ನಿವಾಸಿಯಾದ ಕರಿಹಾಲಪ್ಪ (58) ಹಸುವನ್ನು ಮೇಯಿಸಲು ಕೊಡಕಿಕೆರೆ ಗ್ರಾಮದ ಸನಿಹದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಿದ್ದು, ಗಿಡಗಳ ಪೊದೆಯಲ್ಲಿ ಅಡಗಿ ಕುಳಿತಿದ್ದ ಚಿರತೆ ಮೇಲೆ ದಿಢೀರ್ ದಾಳಿ ನಡೆಸಿದೆ. ಹತ್ತಿರದಲ್ಲಿ ಮೇವು ತಿನ್ನುತ್ತಿದ್ದ ಹಸು ಈ ದೃಶ್ಯ ನೋಡಿದ್ದು, ತಕ್ಷಣ ಓಡಿ ಬಂದು ಕೊಂಬಿನಿಂದ ಚಿರತೆಗೆ ತಿವಿದು ಅದನ್ನು ಓಡಿಸಿ ಕರಿಹಾಲಪ್ಪ ಅವರನ್ನು ರಕ್ಷಿಸಿದೆ.
ಇದನ್ನು ಓದಿ: ಅಪರೂಪದ ಗಿಳಿಗಳ ನಾಡು ದೇವನಗರಿ ದಾವಣಗೆರೆ: ಗಿಳಿವಿಂಡು ಕಾರ್ಯಕ್ರಮದ ಮೂಲಕ ಗಮನ ಸೆಳೆದ ಪಕ್ಷಿ ಪ್ರೇಮಿಗಳು !
ಮಾಲೀಕನ ಪ್ರಾಣ ರಕ್ಷಣೆ ಮಾಡಿದ ಹಸು
ಚಿರತೆ ದಿಢೀರ್ ನನ್ನ ಮೇಲೆ ಎರಗಿ ಬೆನ್ನು ಮತ್ತು ಕೈಯನ್ನು ಪರಚಿದ್ದು, ತಕ್ಷಣ ನಾನು ಕೈಯಲ್ಲಿದ್ದ ಕೋಲಿನಿಂದ ಹೊಡೆದು ಚಿರತೆ ಓಡಿಸಲು ಪ್ರಯತ್ನಿಸಿದೆ. ಆದರೆ ಚಿರತೆ ಬೆದರದೆ ದಾಳಿ ನಡೆಸಿತು. ಸ್ವಲ್ಪ ದೂರದಲ್ಲಿ ಮೇವು ತಿನ್ನುತ್ತಿದ್ದ ನನ್ನ ಹಸು ನನ್ನ ಅಸಹಾಯಕತೆ ಕಂಡು ನೆರವಿಗೆ ಧಾವಿಸಿ, ಕೊಂಬಿನಿಂದ ತಿವಿಯುತ್ತಿದ್ದಂತೆಯೇ ಹೆದರಿದ ಚಿರತೆಯು ಸ್ಥಳದಿಂದ ಓಡಿ ಹೋಯಿತು. ನನ್‌ನ ಹಸುವಿನಿಂದಾಗಿ ಜೀವ ಉಳಿಯಿತು’ ಎಂದು ಕರಿಹಾಲಪ್ಪ ಭಾವುಕರಾಗಿ ನುಡಿದರು ಎಂದು ಪ್ರಜಾವಾಣಿ ವರದಿ ಮಾಡಿದೆ.
ಕರಿಹಾಲಪ್ಪ ತಾವರಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಚಿರತೆ ಪರಚಿರುವುದರಿಂದ ಗಾಯಗಳಾಗಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚನ್ನಗಿರಿ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆಗೆ ಬೋನು ಅಳವಡಿಸಿದ್ದಾರೆ.
ಹಸುವಿನ ಸಾಹಸಕ್ಕೆ ಗ್ರಾಮದಲ್ಲಿ ಸಂಭ್ರಮ
ಜೀವದ ಹಂಗು ತೊತೆದು ತನ್ನ ಮಾಲೀಕನ ರಕ್ಷಣೆಗೆ ಧಾವಿಸಿದ ಹಸುವಿನ ಸಾಹಸವನ್ನು ಗ್ರಾಮದ ಜನ ಕೊಂಡಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಚಿರತೆಯೊಂದು ಈ ಭಾಗದ ಹಲವು ತೋಟಗಳಲ್ಲಿ ಓಡಾಡುತ್ತಿತ್ತು. ಆದರೆ ಯಾರ ಮೇಲೂ ದಾಳಿ ನಡೆಸಿರಲಿಲ್ಲ. ಕರಿಹಾಲಪ್ಪ ಅವರ ಮೇಲೆ ದಾಳಿ ನಡೆಸಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಗ್ರಾಮಸ್ಥ ಕೆ.ಬಿ.ಮಾರುತಿ ತಿಳಿಸಿದ್ದಾರೆ.
English summary: A cow that saved the owner life from a leopard attack in channagiri.